ಕ್ಯಾನ್‍ಬರ

ಆಸ್ಟ್ರೇಲಿಯ ಕಾಮನ್‍ವೆಲ್ತಿನ ರಾಜಧಾನಿ. ಸಿಡ್ನಿಯಿಂದ ನೈಋತ್ಯಕ್ಕೆ 190 ಮೈ. ಮೆಲ್‍ಬರ್ನಿನಿಂದ ಆಗ್ನೇಯಕ್ಕೆ 418 ಮೈ. ಆಡ್‍ಲೇಡ್‍ನಿಂದ ಪೂರ್ವಕ್ಕೆ 760 ಮೈ. ಮತ್ತು ಪೆಸಿಫಿಕ್ ಕರಾವಳಿಯಿಂದ ಸು.70 ಮೈ. ದೂರದಲ್ಲಿದೆ. ಜನಸಂಖ್ಯೆ 28,277 (1954).

	ವಾಷಿಂಗ್ಟನ್ ಡಿ.ಸಿ. ಮುಂತಾದ ಕೆಲವು ರಾಷ್ಟ್ರರಾಜಧಾನಿಗಳಂತೆ ಕ್ಯಾನ್‍ಬರವನ್ನು ರಾಜಧಾನಿಯಾಗಲು ಆರಿಸಿ ಯೋಜಿಸಿದಾಗ ಅಲ್ಲಿ ಹೆಚ್ಚು ಜನವಸತಿ ಇರಲಿಲ್ಲ. ಉದ್ದೇಶಪೂರ್ವಕವಾಗಿಯೇ ಅದನ್ನು ಆರಿಸಲಾಯಿತು. ಬಿಳಿಯರು ಈ ಪ್ರದೇಶವನ್ನು ಮೊಟ್ಟಮೊದಲು ಪ್ರವೇಶಿಸಿದ್ದು 1820ರಲ್ಲಿ. ಈ ಪ್ರದೇಶದಲ್ಲಿ ಸಾಕಷ್ಟು ನೀರಿನ ಸೌಲಭ್ಯವೂ ಫಲವತ್ತಾದ ಮೈದಾನವೂ ಸಮೃದ್ಧವಾಗಿ ಕಟ್ಟಡ ಸಾಮಗ್ರಿಯೂ ಇರುವುವೆಂಬುದು ಅವರು ನೀಡಿದ ವರದಿ. 1824ರ ಸುಮಾರಿಗೆ ಸಣ್ಣ ಗುಂಪೊಂದು ಇಲ್ಲಿಗೆ ಬಂದು ಖಾಯಂ ಆಗಿ ನೆಲಸಿತು. ಅಂದಿನಿಂದ ಈ ಪ್ರದೇಶ ಅಭಿವೃದ್ಧಿಯಾಗತೊಡಗಿತು. ಸೇಂಟ್ ಜಾನ್ ಚರ್ಚ್ ಭಾಗಶಃ ನಿರ್ಮಾಣವಾದ್ದು 1845ರಲ್ಲಿ. 19ನೆಯ ಶತಮಾನದ ಕೊನೆಯ ವೇಳೆಗೆ ಇದು ಸಂಪ್ರದಾಯವಂತ ಕಷ್ಟಸಹಿಷ್ಣು ತೃಪ್ತಜೀವಿಗಳ ನೆಲೆಯಾಗಿತ್ತು.

	ಆಸ್ಟ್ರೇಲಿಯ ಸಂಯುಕ್ತರಾಷ್ಟ್ರ ಸ್ಥಾಪನೆಯಾಗಬೇಕೆಂಬ ಬೇಡಿಕೆ ಹೆಚ್ಚಿದೊಡನೆಯೇ ರಾಷ್ಟ್ರದ ರಾಜಧಾನಿ ಯಾವುದಿರಬೇಕೆಂಬ ಬಗ್ಗೆ ಜನಾಭಿಪ್ರಾಯವನ್ನು ಆಹ್ವಾನಿಸಲಾಯಿತು. ಆಸ್ಟ್ರೇಲಿಯ ಕಾಮನ್‍ವೆಲ್ತ್ ಉದ್ಘಾಟನೆಯಾದ್ದು 1901ರಲ್ಲಿ, 1900 ರಲ್ಲಿ ಅನುಮೋದಿತವಾದ ಕಾಮನ್‍ವೆಲ್ತ್ ಸಂವಿಧಾನ ಕಾನೂನಿನ ಪ್ರಕಾರ ನ್ಯೂ ಸೌತ್ ವೇಲ್ಸಿನಲ್ಲಿ ರಾಜಧಾನಿಯೊಂದನ್ನು ಸ್ಥಾಪಿಸುವುದಕ್ಕೆ ಅವಕಾಶವಿತ್ತಾದರೂ ಅದನ್ನು ಸಿಡ್ನಿಯಿಂದ 100 ಮೈ. ಒಳಗೆ ನಿರ್ಮಿಸುವಂತಿರಲಿಲ್ಲ. ಎರಡು ರಾಯಲ್ ಆಯೋಗಗಳು ರಾಜಧಾನಿಯ ವಿಷಯವನ್ನು ಪರಿಶೀಲಿಸಿ ವರದಿ ಮಾಡಿದುವು. ಈ ಬಗ್ಗೆ ವಿಪುಲವಾಗಿ ಸಾರ್ವಜನಿಕ ಚರ್ಚೆ ನಡೆಯಿತು. ಕೊನೆಗೆ ಕಾಮನ್‍ವೆಲ್ತ್ ಪಾರ್ಲಿಮೆಂಟು ಯಾಸ್ ಕ್ಯಾನ್‍ಬರ ಜಿಲ್ಲೆಯನ್ನು ಇದಕ್ಕಾಗಿ ಆರಿಸಿತು. ಅನಂತರ ನಗರದ ನಿವೇಶನದ ಆಯ್ಕೆ ನಡೆಯಿತಲ್ಲದೆ ಸುಮಾರು 900 ಚ.ಮೈ. ಪ್ರದೇಶವನ್ನು ನ್ಯೂ ಸೌತ್ ವೇಲ್ಸಿನಿಂದ ಕಾಮನ್‍ವೆಲ್ತಿಗೆ ವರ್ಗಾಯಿಸಲಾಯಿತು. ರಾಜಧಾನಿಯ ಆಲೇಖ್ಯಕ್ಕಾಗಿ ವಿಶ್ವಾದ್ಯಂತ ಸ್ಪರ್ಧೆಯೊಂದನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದಾತ ಷಿಕಾಗೋವಿನ ವಾಲ್ಟರ್ ಬಿ.ಗ್ರಿಫಿನ್ (1876-1937). ರಾಜಧಾನಿಯ ನಿರ್ಮಾಣ 1913ರಲ್ಲಿ ಪ್ರಾರಂಭವಾಯಿತಾದರೂ ಒಂದನೆಯ ಮಹಾಯುದ್ಧದಿಂದಾಗಿ ಅದು ನಿಧಾನವಾಯಿತು. ನಗರ ನಿರ್ಮಾಣದ ಮೇಲ್ವಿಚಾರಣೆಯನ್ನು 1915ರಿಂದ 1920ರ 1920ರ ವರೆಗೆ ಗ್ರಿಫಿನನೇ ವಹಿಸಿಕೊಂಡಿದ್ದ.

	ಯುದ್ಧದ ಅನಂತರ ರಾಜಧಾನಿಯ ನಿರ್ಮಾಣದ ಕೆಲಸವನ್ನು ಫೆಡರಲ್ ಕ್ಯಾಪಿಟಲ್ ಕೌನ್ಸಿಲ್ ತ್ವರೆಗೊಳಿಸಿತು. ಈ ಪ್ರದೇಶದ ನಿರ್ಮಾಣ ಮತ್ತು ಆಡಳಿತ ಕಲಾಪಗಳೆಲ್ಲ ಅದರ ವಶಕ್ಕೆ ಬಂದದ್ದು 1925ರಲ್ಲಿ. ಯಾರ್ಕಿನ ಡ್ಯೂಕ್ (ಅನಂತರ 6ನೆಯ ಜಾರ್ಜ್) ನೂತನ ಪಾರ್ಲಿಮೆಂಟಿನ ಭವನವನ್ನು ಉದ್ಘಾಟಿಸಿದ (1927). ಅನಂತರ ಮೆಲ್‍ಬರ್ನಿನಿಂದ ಕೇಂದ್ರ ನೌಕರರ ವರ್ಗಾವಣೆ ಪ್ರಾರಂಭವಾಯಿತು. ಆಕರ್ಷಕವಾದ ಮನೆಗಳು, ಶಾಲೆಗಳು ಮತ್ತು ಇತರ ಮುಖ್ಯ ಕಟ್ಟಡಗಳು ಕ್ಯಾನ್‍ಬರದ ಉಪನಗರಗಳಲ್ಲಿ ತಲೆಯೆತ್ತಿದುವು. ಕ್ಯಾನ್‍ಬರ ವಿಶ್ವವಿದ್ಯಾಲಯ ಕಾಲೇಜು ಸ್ಥಾಪಿತವಾದ್ದು 1930ರಲ್ಲಿ. ರಾಷ್ಟ್ರೀಯ ಗ್ರಂಥಾಲಯದ ಶಾಖೆಯೊಂದು ಪ್ರಾರಂಭವಾದ್ದು 1936ರಲ್ಲಿ. ವಿಶ್ವ ಆರ್ಥಿಕ ಮುಗ್ಗಟ್ಟು ಮತ್ತು ಎರಡನೆಯ ಮಹಾಯುದ್ಧದಿಂದಾಗಿ ನಗರದ ಪ್ರಗತಿ ನಿಧಾನವಾಯಿತು. ಆದರೂ ಆಸ್ಟ್ರೇಲಿಯ ಯುದ್ಧಸ್ಮಾರಕ ಮತ್ತು ಏಕಸ್ವ ಕಾರ್ಯಾಲಯಗಳು ಅಲ್ಲಿ 1941ರಲ್ಲಿ ಪ್ರಾರಂಭವಾದುವು. ವಿಶಾಲವಾದ ಆಸ್ಪತ್ರೆ 1943ರಲ್ಲಿ ಪ್ರಾರಂಭವಾಯಿತು. ನಗರದ ಬೆಳವಣಿಗೆಯ ವೇಗ ಹೆಚ್ಚಿದ್ದು ಎರಡನೆಯ ಮಹಾಯುದ್ಧದ ಅನಂತರವೇ. 8,000ಕ್ಕೂ ಹೆಚ್ಚು ಮನೆಗಳೂ ಆಡಳಿತ ಕಚೇರಿಗಳ ಭವನಗಳೂ 1946ರಲ್ಲಿ ಸ್ಥಾಪಿತವಾದ ಆಸ್ಟ್ರೇಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯದ ವಿಶಾಲಕಟ್ಟಡಗಳೂ ನಿರ್ಮಾಣವಾದುವು. ಅನೇಕ ಶಾಲೆಗಳೂ ಅಂಗಡಿಗಳೂ ತಲೆ ಎತ್ತಿದುವು. ರಕ್ಷಣ ವಿಭಾಗಕ್ಕೆ ಸೇರಿದ ನೂರಾರು ಅಧಿಕಾರಿಗಳು ಮೆಲ್‍ಬರ್ನಿನಿಂದ ಕ್ಯಾನ್‍ಬರಕ್ಕೆ ವರ್ಗವಾಗಿ ಬಂದರು. ಕಾಮನ್‍ವೆಲ್ತಿನ ಸೇವೆಗಾಗಿ ಇನ್ನೂ ಕೆಲವು ನೌಕರರನ್ನು ವರ್ಗಾಯಿಸಲು ಯೋಜಿಸಲಾಯಿತು. ರಾಜಧಾನಿ ಅಭಿವೃದ್ದಿ ಆಯೋಗವನ್ನು ಸ್ಥಾಪಿಸಿದ್ದು 1958ರಲ್ಲಿ. ನಗರಾಭಿವೃದ್ಧಿಗಾಗಿ ಈ ಆಯೋಗ ನೀಡಿದ ಪಂಚವಾರ್ಷಿಕ ಯೋಜನೆಯನ್ನು ಸರ್ಕಾರ ತತ್ತ್ವಶಃ ಅಂಗೀಕರಿಸಿತು. ರಕ್ಷಣ ವಿಭಾಗಕ್ಕಾಗಿ ಕಟ್ಟಡಗಳನ್ನೂ ನಗರದ ಸೌಂದರ್ಯಾಭಿವರ್ಧನಕ್ಕಾಗಿ ಅದರ ಹೃದಯಪ್ರದೇಶದಲ್ಲಿ ಅಲಂಕರಣ ತಟಾಕಗಳನ್ನೂ ನಿರ್ಮಿಸಬೇಕೆಂಬುದು ಈ ಆಯೋಗದ ಮುಖ್ಯ ಸಲಹೆಗಳು. 

ಕ್ಯಾನ್‍ಬರವನ್ನು ಅಧ್ಯಯನ ಮತ್ತು ಸಂಶೋಧನ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಲಾಗಿದೆ. ಕ್ಯಾನ್‍ಬರ ವಿಶ್ವವಿದ್ಯಾಲಯದಲ್ಲಿ ಸ್ನಾತಕಪೂರ್ವ ಶಿಕ್ಷಣವನ್ನೆ ಅಲ್ಲದೆ ವೈದ್ಯಶಾಸ್ತ್ರ, ಪೆಸಿಫಿಕ್ ಅಧ್ಯಯನ, ಶರೀರವಿಜ್ಞಾನ, ಸಮಾಜ ವಿಜ್ಞಾನ-ಇವುಗಳಲ್ಲಿ ಸ್ನಾತಕೋತ್ತರ ಶಿಕ್ಷಣವನ್ನೂ ಏರ್ಪಡಿಸಲಾಗಿದೆ. ಅರಣ್ಯಶಾಸ್ತ್ರ ಮತ್ತು ಚೌಬೀನೆ ವಿಭಾಗ, ಆಸ್ಟ್ರೇಲಿಯನ್ ಅಂಗರಚನಶಾಸ್ತ್ರ ಸಂಸ್ಥೆ, ಮೌಂಟ್‍ಸ್ಟ್ರಾಮ್ಲೊ ಖಗೋಳವೀಕ್ಷಣಾಲಯ, ಕೃಷಿ ಅರ್ಥಶಾಸ್ತ್ರ ವಿಭಾಗ, ರಾಷ್ಟ್ರೀಯ ಗ್ರಂಥಾಲಯ ಮೊದಲಾದ ಸಂಸ್ಥೆಗಳು ಇಲ್ಲಿವೆ. ಇಲ್ಲಿಂದ ಒಳನಾಡಿಗೆ ರಸ್ತೆಗಳುಂಟು. ನ್ಯೂ ಸೌತ್ ವೇಲ್ಸಿನೊಂದಿಗೆ ರೈಲ್ವೆ ಸಂಪರ್ಕವಿದೆ. ಕ್ಯಾನ್‍ಬರದಿಂದ ಸಿಡ್ನಿ ಮತ್ತು ಮೆಲ್‍ಬರ್ನ್‍ಗಳಿಗೂ ಅಲ್ಲಿಂದ ಆಸ್ಟ್ರೇಲಿಯದ ಇತರ ರಾಜ್ಯಗಳ ರಾಜಧಾನಿಗಳಿಗೂ ಹೋಗಿ ಬರಲು ವಿಮಾನ ಸೌಲಭ್ಯವುಂಟು. 				*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ